ಬರ್ಕ್, ಕಾರ್ಲ್ ಡಾರ್ಲಿಂಗ್
	1866-1955. ಅಮೆರಿಕದ ಭಾಷಾವಿಜ್ಞಾನಿ. ಶಿಕಾಗೊ ವಿಶ್ವವಿದ್ಯಾಲಯದಲ್ಲಿ ತೌಲನಿಕ ಭಾಷಾ ವಿಜ್ಞಾನದ ಹಾಗೂ ಸಂಸ್ಕøತ ವಿಭಾಗದ ಎಮರಿಟಿಸ್ ಪ್ರಾಧ್ಯಾಪಕ (1900-33). ಈತನ ಮಹತ್ತ್ವದ ಕೃತಿಗಳು-ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳ ತೌಲನಿಕ ವ್ಯಾಕರಣ ಹಾಗೂ ಗ್ರೀಕ್ ಉಪಭಾಷಾಧ್ಯಯನ ಪೀಠಿಕೆ. ಈ ಕೃತಿಗಳು ಸತತವಾಗಿ ಇಪ್ಪತ್ತು ವರ್ಷಗಳ ಅಧ್ಯಯನ ಸಹೋದ್ಯೋಗಿಗಳ ಸಹಕಾರಗಳ ಫಲ. ಈತನ ಇನ್ನೊಂದು ಮಹತ್ತ್ವದ ಕೃತಿಯೆಂದರೆ ಇಂಡೋ-ಯೂರೋಪಿಯನ್ ಭಾಷೆಗಳಿಂದ ಆಯ್ದ ಸಮಾನಾರ್ಥಕ ಪದಕೋಶ. ಇಲ್ಲಿ ಅರ್ಥಾನುಸಾರಿಯಾಗಿ ಶಬ್ದಗಳನ್ನು ಆಯ್ಕೆಮಾಡಿದೆ. ಈ ಬಗೆಯ ವರ್ಗೀಕರಣ ಅಲ್ಲಿಯವರೆಗೆ ಬಳಕೆಯಲ್ಲಿದ್ದ ರೂಪಾತ್ಮಕ ವರ್ಗೀಕರಣಕ್ಕಿಂತ ತೀರ ಭಿನ್ನ. ಒಂದು ವಿಚಾರವನ್ನು ಹೇಳುವ ಎಲ್ಲ ಪದಗಳ ಪಟ್ಟಿಮಾಡಿ ಅವುಗಳ ಉತ್ಪತ್ತಿಯನ್ನಿಲ್ಲಿ ಚರ್ಚಿಸಲಾಗಿದೆ. ಇದೊಂದು ಕಷ್ಟಸಾಧ್ಯ ಕೃತಿ. ಒಂದು ಸಾವಿರಕ್ಕೂ ಹೆಚ್ಚು ಅರ್ಥ ಘಟಕಗಳನ್ನು ಮುಖ್ಯ ಇಂಡೋ-ಯೂರೋಪಿಯನ್ ಭಾಷೆಗಳಿಂದ ಆಯ್ದು ಕೋಶವನ್ನು ರಚಿಸಲಾಗಿದೆ. ನಿಜವಾಗಿಯೂ ಇದು ಅತ್ಯಂತ ಸಾಹಸದ ಕೆಲಸ. ತನ್ನ ಅಧ್ಯಾಪಕ ವೃತ್ತಿಯಲ್ಲಿ ಈತ ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳ ತೌಲನಿಕ ವ್ಯಾಕರಣವನ್ನು ಏಕಪ್ರಕಾರವಾಗಿ ಪರಿಷ್ಕರಿಸುತ್ತಲೆ ಬಂದಿದ್ದಾನೆ. ಈ ಕೃತಿಯಲ್ಲಿ ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳು ಸೋದರ ಭಾಷೆಗಳೆಂದು ಕಣ್ಮುಚ್ಚಿ ಸ್ವೀಕರಿಸದೆ, ಅವೆರಡೂ ಅಕ್ಕಪಕ್ಕದ ಭಾಷೆಗಳೆಂದು ಗ್ರಹಿಸಿ, ಎಲ್ಲವನ್ನೂ ತೂಗಿ ನೋಡಿ, ಅವುಗಳ ಸಂಬಂಧವನ್ನು ಒರೆಗೆ ಹಚ್ಚಿನೋಡಿದ್ದಾನೆ. ಅಲ್ಲದೆ ಸಾಂಸ್ಕøತಿಕ, ಸಾಹಿತ್ಯಿಕ ಹಾಗೂ ಇತರ ಸಂಬಂಧಗಳ ಮೂಲಕ ಈ ಎರಡು ಪ್ರಾಚೀನ ಭಾಷೆಗಳನ್ನು ಇಲ್ಲಿ ಪರಿಶೀಲಿಸಲಾಗಿದೆ. ಸಂಸ್ಕøತ, ಗಾತಿಕ್ ಹಾಗೂ ಲಿತುಯೇನಿಯನ್ ಭಾಷೆಗಳ ಜ್ಞಾನವನ್ನು ಗೃಹೀತವಾಗಿಟ್ಟುಕೊಳ್ಳದೆ ಈತ ವಿಷಯ ನಿರೂಪಣೆಗಾಗಿ ಧಾರಾಳ ಉದ್ಧರಣೆಗಳನ್ನು ಕೊಟ್ಟಿದ್ದಾನೆ. ಗ್ರೀಕ್ ಹಾಗೂ ಲ್ಯಾಟಿನ್‍ಗಳ ಉಪಭಾಷೆಗಳ ಸಾಮಗ್ರಿಯನ್ನು ಅವಶ್ಯವಿದ್ದಲ್ಲಿ ಬಳಸಿಕೊಂಡಿದ್ದಾನೆ.
(ಜೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ